ನಿಮ್ಮ ಧೀರ್ಘಕಾಲಿನ ಚರ್ಮ ರೋಗಗಳ ಚಿಕಿತ್ಸೆಯಲ್ಲಿ ವ್ಯಾಯಾಮವನ್ನು ಸೇರಿಸಿ. ಇದರಿಂದ ನೀವು ಬೇಗ ಗುಣಮುಖರಾಗುವುದು ಸುಲಭ.
ಇದಕ್ಕಾಗಿ ಇಲ್ಲಿ ನಾನು ಕೆಲವಾರು ಕಿವಿಮಾತುಗಳನ್ನು ಹೇಳುತ್ತೇನೆ.
1. ನಿಧಾನವಾಗಿ ಪ್ರಾರಂಭಿಸಿ
ನೀವು ಇದುವರೆವಿಗೂ ವ್ಯಾಯಾಮವನ್ನು ಮಾಡದೇ ಇದ್ದರೆ ಈಗ ಹುರುಪಿನಿಂದ ಹೆಚ್ಚುವರಿ ವ್ಯಾಯಾಮವನ್ನು ಮಾಡಲು ಹೋಗಬೇಡಿ. ನೀವು ನಿಧಾನವಾಗಿ ಆರಾಮದಾಯಕ ವೇಗದಲ್ಲಿ ನಿಮ್ಮ ದೈಹಿಕ ಶ್ರಮವನ್ನು ಪ್ರಾರಂಭಿಸಿ. ಮೊದಲು ನಿದಾನವಾಗಿ ನಡೆಯಲು ಪ್ರಾರಂಭಿಸಿ. ನಂತರ ವೇಗವಾಗಿ ನಡೆಯಲು ಪ್ರಾರಂಭಿಸಿ. ನಂತರ ನಿದಾನವಾಗಿ ಹೋಡಲು ಮುಂದುವರೆಸಿ. ವ್ಯಾಯಾಮದ ಸಂಖ್ಯೆಗಳನ್ನು ಹಾಗೂ ವ್ಯಾಯಾಮ ಸಮಯವನ್ನು ದಿನೇ ದಿನೇ ನಿದಾನವಾಗಿ ಹೆಚ್ಚಿಸಿ. ಹಂತ ಹಂತವಾಗಿ ಮುಂದುವರೆಯುವುದು ಉತ್ತಮ. ಹೀಗೆ ಹಂತ ಹಂತವಾಗಿ ಮುಂದುವರೆಯುವುದು ನಿಮ್ಮನ್ನು ಅನೇಕ ತೊಂದರೆಗಳಿಂದ ರಕ್ಷಿಸುತ್ತದೆ.
ಪ್ರಾರಂಭದಲ್ಲೇ ಅತಿ ವೇಗವಾಗಿ ವ್ಯಾಯಾಮ ಮಾಡಲು ಹೊರಟರೆ ನೋವಿನಿಂದ ಅಥವ ಸಣ್ಣ ಪುಟ್ಟ ತೊಂದರೆಗಳಿಂದ ನೀವು ವ್ಯಾಯಾಮನ್ನೇ ನಿಲ್ಲಿಸುವ ಸಾಧ್ಯತೆ ಇದೆ. ಆಗ ನೀವು ವ್ಯಾಯಾಮದಲ್ಲಿ ಸೋಲುತ್ತೀರಿ.
ಧೀರ್ಘಕಾಲಿನ ಚರ್ಮ ರೋಗಗಳ ಜೊತೆಗೆ ನೀವು ಇತರ ಕಾಯಿಲೆಗಳಿಂದ ಬಳಲುತಿದ್ದರೆ ನೀವು ವ್ಯಾಯಾಮವನ್ನು ಪ್ರಾರಂಭಿಸುತ್ತೀರೆಂದು ನಿಮ್ಮ ವೈದ್ಯರಿಗೆ ತಿಳಿಸಿ. ಅವರ ಸಲಹೆಯೊಂದಿಗೆ ವ್ಯಾಯಾಮ ಮಾಡಿ.
2. ಸಣ್ಣ ಸಣ್ಣ ದೈಹಿಕ ಚಟುವಟಿಕೆಗಳ ಮೇಲೆ ನಿಗ ಇಡಿ
-
ವ್ಯಾಯಾಮ ನಿಮ್ಮ ದೇಹವನ್ನು ಮಾತ್ರ ಬದಲಾಯಿಸುವುದಿಲ್ಲ. ಅದು ನಿಮ್ಮ ಮನಸ್ಸನ್ನು, ಭಾವನೆಗಳನ್ನು
ಮತ್ತು ನಿಮ್ಮ ದೃಷ್ಟಿಕೋನವನ್ನು ಬದಲಾಯಿಸುತ್ತದೆ. ___ ಡಾ.ಜಿ.ತಿಮ್ಮರಾಯ ಗೌಡ
ದಿನಂಪ್ರತಿ ವ್ಯಾಯಾಮವನ್ನು ನಿಯಮಿತವಾಗಿ ಮಾಡುವುದು ಬೇರೆ. ಆದರೆ ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಬೇರೆ.
ಕುಡಿಯಲು ನೀರು ಅಥವಾ ಬೇರೆ ಏನಾದರು ವಸ್ತು ಬೇಕಿದ್ದಲ್ಲಿ ಬೇರೆಯವರ ಕೈಲಿ ತರಿಸಿಕೊಳ್ಳುವುದನ್ನು ಬಿಟ್ಟು ನೀವೇ ಎದ್ದು ಹೋಗಿ ತೆಗೆದುಕೊಳ್ಳಿ. ಮಹಡಿಗಳ ಮೇಲೆ ಹೋಗಬೇಕಾದರೆ ಲಿಫ್ಟ್ ಮುಖಾಂತರ ಹೋಗುವುದರ ಬದಲು ಮೆಟ್ಟಿಲು ಹತ್ತಿ ಹೋಗಿ. ಸ್ವಲ್ಪವೇ ದೂರಕ್ಕೆ ಹೋಗಲು ಬಸ್ ಅಥವಾ ರಿಕ್ಷಾ ಹಿಡಿಯುವುದರ ಬದಲು ನಡೆದುಕೊಂಡು ಹೋಗಿ.
3. ಬಿಸಿಲಿನಲ್ಲಿ ಬರಿಗಾಲಲ್ಲಿ ನಡೆಯಿರಿ
ವಿಟಮಿನ್ ಡಿ೩ ದೇಹಕ್ಕೆ ಅತ್ಯವಶ್ಯಕವಾಗಿ ಬೇಕಾಗುವಂಥದು. ಅದರ ಉತ್ಪತ್ತಿಗಾಗಿ ಬಿಸಿಲು ಅವಶ್ಯಕ. ಅದಕ್ಕಾಗಿ ಬಿಸಿಲಿನಲ್ಲಿ ಸಮಯವನ್ನು ಕಳೆಯಿರಿ. ಬಿಸಿಲಿನಲ್ಲಿ ಕೆಲಸವನ್ನು ಮಾಡಿ. ಬಿಸಿಲಿನಲ್ಲಿ ನಡೆಯಿರಿ. ಹೀಗೆ ನಡೆಯುವಾಗ ಬರಿಗಾಲಲ್ಲಿ ನಡೆಯಿರಿ. ಇದರಿಂದ ನಿಮ್ಮಲ್ಲಿ ಹೆಚ್ಚಿರುವ ವಿದ್ಯುತ್ಕಾಂತವನ್ನು ಭೂಮಿಗೆ ಬಿಟ್ಟು ನಿಮ್ಮ ದೇಹದಲ್ಲಿ ಕಾಂತ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಸ್ವಲ್ಪ ಸಮಯ ಹಿಮ್ಮುಕವಾಗಿ ನಡೆಯಿರಿ. ಇದರಿಂದ ದೇಹದಲ್ಲಿ ದೈಹಿಕ ಸಮತೋಲನವುಂಟಾಗುತ್ತದೆ.
4. ದಾರಾಳವಾಗಿ ನೀರು ಕುಡಿಯಿರಿ
ವ್ಯಾಯಾಮದಲ್ಲಿ ಬೆವರಿನ ಮುಖಾಂತರ ದೇಹದಿಂದ ನೀರು ಹೊರಹೋಗುತ್ತದೆ. ನೀರು ದೇಹದ ಚಟುವಟಿಕೆಗಳಿಗೆ ಅತ್ಯಾವಶ್ಯಕ. ಈ ಜಲನಷ್ಟವನ್ನು ಸರಿದೂಗಿಸಲು ನೀವು ವ್ಯಾಯಾಮದ ಮದ್ಯದಲ್ಲಿ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುತ್ತಿರಿ. ನೀರನ್ನು ಜಾಸ್ತಿ ಕುಡಿದು ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸಬೇಡಿ. ಎಳನೀರನ್ನು ಕುಡಿಯಿರಿ. ಎಳನೀರು ಖನಿಜಗಳಿಂದ ತುಂಬಿದೆ. ಹಣ್ಣಿನ ರಸವನ್ನು ದಾರಾಳವಾಗಿ ಸೇವಿಸಿ.
5. ನಿಮ್ಮ ವ್ಯಾಯಾಮಕ್ಕೆ ಹೊಣೆಗಾರಿಕೆ ಸ್ನೇಹಿತರನ್ನು ಹೊಂದಿಸಿಕೊಳ್ಳಿ
ನಿಮ್ಮ ವ್ಯಾಯಾಮ ಯಶಸ್ವಿಯಾಗಿ ಮುಂದುವರೆಯಲು ನೀವು ಹೊಣೆಗಾರಿಕೆ ಸ್ನೇಹಿತರನ್ನು ಇಟ್ಟುಕೊಳ್ಳುವದು ಒಳ್ಳೆಯದು. ಅದರಲ್ಲೂ ನೀವು ಈಗ ತಾನೆ ವ್ಯಾಯಾಮ ಪ್ರಾರಂಭಿಸುತ್ತೀರಾದರೆ ನೀವು ಸುಸ್ತಾದಾಗ, ಜಡತ್ವ ಹೊಂದಿದಾಗ, ಸೋಲುವಂತಾದಾಗ, ನಿಮ್ಮ ಗೆಲುವನ್ನು ಆಶಿಸುವ ಸ್ನೇಹಿತರ ಹೊಣೆಗಾರಿಕೆ ಬಹು ಮುಖ್ಯವಾಗಿರುತ್ತದೆ. ನಿಮ್ಮ ಸ್ನೇಹಿತರ ಹುರಿದುಂಬಿಸುವಿಕೆಯಿಂದಾಗಿ ನೀವು ಹುಮ್ಮಸ್ಸು ಕಳೆದುಕೊಂಡಾಗ ಮತ್ತೆ ಮೇಲೆದ್ದು ನಿಂತು ಮುಂದುವರೆಯಲು ಸಾಧ್ಯವಿದೆ ಮತ್ತು ಈ ಕಾರ್ಯ ಸುಲಭವಾಗುತ್ತದೆ. ಆದುದರಿಂದ ನೀವು ವ್ಯಾಯಾಮಕ್ಕಾಗಿ ಹೊಣೆಗಾರಿಕೆ ಸ್ನೇಹಿತರನ್ನು ಇಟ್ಟುಕೊಳ್ಳಿ.
6. ತಣ್ಣೀರು ಸ್ನಾನವನ್ನು ಮಾಡಿ
ಬಹಳ ಸುಸ್ತಾದಾಗ ತಣ್ಣೀರು ಸ್ನಾನ ಬಹಳ ಉಲ್ಲಾಸಕಾರಕವಾಗಿರುತ್ತದೆ. ಹರ್ಷದಾಯಕವಾಗಿರುತ್ತದೆ. ಶೀತಲ ನೀರಿನ ಸ್ನಾನ ಚೇತೋಹಾರಿಯಾಗಿರುತ್ತದೆ. ಅದಕ್ಕೆ ವಿರುದ್ಧವಾಗಿ ಬಿಸಿನೀರು ಸ್ನಾನ ನಿಮ್ಮ ಸುಸ್ತನ್ನು ಜಾಸ್ತಿ ಮಾಡುತ್ತದೆ. ಇದನ್ನು ನೀವು ಪ್ರಯೋಗ ಮಾಡಿ ನೋಡಿ. ನಿಮ್ಮ ಸ್ವಾನುಭವ ನಿಮ್ಮನ್ನು ಉತ್ತೇಜಿತರನ್ನಾಗಿ ಮಾಡುತ್ತದೆ. ತಣ್ಣೀರು ಸ್ನಾನವನ್ನು ಸ್ವೀಕರಿಸುವಂತೆ, ಪ್ರೀತಿಸುವಂತೆ ಮಾಡುತ್ತದೆ.
ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡುವುದು ಆರೋಗ್ಯಕರ ಜೀವನಶೈಲಿಯ ಭಾಗವಾಗಿದೆ. ಸ್ವಲ್ಪ ತಾಳ್ಮೆ ಮತ್ತು ಪರಿಶ್ರಮದಿಂದ, ನೀವು ವ್ಯಾಯಾಮವನ್ನು ನಿಮ್ಮ ದಿನಚರಿಯ ಭಾಗವಾಗಿ ಮಾಡಬಹುದು. ಇದು ನಿಮ್ಮ ಧೀರ್ಘಕಾಲಿನ ಚರ್ಮ ರೋಗಗಳ ಉರಿಯೂತವನ್ನು ಕಡಿಮೆಗೊಳಿಸಲು ಸಹಾಯಮಾಡುತ್ತದೆ. ರಕ್ತ ಚಲನೆಯನ್ನು ವೃದ್ಧಿಗೊಳಿಸುತ್ತದೆ. ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಪೂರಕವಾಗಿದೆ.
ಆದುದರಿಂದ ನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡಿ. ಆರೋಗ್ಯದಿಂದಿರಿ.
Leave a Reply
Your email address will not be published. Required fields are marked *